ದೇವಸ್ಥಾನದ ಬಗ್ಗೆ



ಕಾನ ಶ್ರೀ ಶಂಕರನಾರಾಯಣ ದೇವರ ಮಠ


ಕಾನ ಶಂಕರನಾರಾಯಣ ದೇವರ ಮಠ , ಕಾನ ಧೂಮಾವತಿ ದೈವಸ್ಥಾನ ,ಕಾನ ಪೂಮಾಣಿ ಕಿನ್ನಿಮಾಣಿ ಕಟ್ಟೆ,ನಾಯ್ಕಪಿನಲ್ಲಿರುವ ಕಾನ ವನ ಶಾಸ್ತಾವು ಕಾನ ಗ್ರಾಮದ ಹನ್ನೆರಡು ಮನೆಯವರು ಆರಾಧಿಸಿಕೊಂಡು ಬಂದಿರುವ ಆರಾಧನಾ ಕ್ಷೇತ್ರಗಳು .ಪೂರ್ವಿಕರ ಕಾಲದಲ್ಲಿ ಆರಾಧನೆ ಪ್ರಾರಂಭಿಸಿದ ಹನ್ನೆರಡು ಮನೆಗಳು ಈ ಕೆಳಗೆ ಹೇಳಲ್ಪಡುವ ಮನೆಗಳಾಗಿವೆ .ಹಿಳ್ಳೆಮನೆ ,ಕಿಟ್ಟಜ್ಜನ ಮನೆ ( ಹರಿಯಪ್ಪನ ಮನೆ ) ಪೊಟ್ಟನ ಮನೆ , ಕಟ್ಟಂಪಾಡಿ ( ಹಿತ್ತಿಲ ಮನೆ) , ನಾಣಿತ್ತಿಲು , ಕೋಣಮ್ಮೆ ( ಪುರೋಹಿತರ ಮನೆ ) ಶೇಡಿಗುಮ್ಮೆ ,ಕಬೆಕ್ಕೋಡು, ಮೇಣ ,ಮೇಲಣ ಮೇಣ , ಬೋನಂತಾಯ , ಪೊಸವಣಿಕೆ . ಕಾಲಕ್ರಮೇಣ ೧೮೬೦ ರ ಕಾಲಘಟ್ಟದಲ್ಲಿ ಪೊಟ್ಟನ ಮನೆಯು ಕಾನ ಗ್ರಾಮದಲ್ಲಿ ನಿರ್ವಂಶವಾಯಿತು ( ಎಡನಾಡಿನಲ್ಲಿರುವ ಮರಿಮನೆ ಕುಟುಂಬದವರು ಈ ಮನೆತನದವರಾಗಿದ್ದಾರೆ . ಈ ಹನ್ನೆರಡು ಮನೆಗಳಲ್ಲದೆ ಕಣ್ಣೂರು ಬೆಣ್ಣೆಮನೆಯವರೂ ಅನಾದಿ ಕಾಲದಿಂದಲೂ ಆರಾಧಿಸಿಕ್ಫಂಡು ಬರುತ್ತಿದ್ದಾರೆ.

ಮುಂದಕ್ಕೆ ೧೮೯೫ ರಲ್ಲಿ ಮೇಲೆ ಹೇಳಿದ ಆರಾಧನಾ ಕ್ಷೇತ್ರಗಳಲ್ಲಿ ಪೂಜೆ ಉತ್ಸವಾದಿ ಕಾರ್ಯಗಳನ್ನು ನಡೆಸಿಕೊಂಡು ಬರಲು . ಹನ್ನೆರಡು ಮನೆಯರು ಸೇರಿ ಅಂದಿನ ಕಾಸರಗೋಡು ನೋಂದಾವಣಾ ಕಚೇರಿಯಲ್ಲಿ ರೆಜಿಸ್ಟರ್ ಮಾಡಿದ ಒಂದು ಕರಾರನ್ನು ಮಾಡಿಕೊಂಡರು ,ಆ ಪ್ರಕಾರವಾಗಿ ಎಲ್ಲ ವ್ಯವಸ್ಥೆಗಳೂ ಯಾವೊಂದೂ ಚ್ಯುತಿಯಿಲ್ಲದೆ ನಡೆದುಕೊಂಡು ಬರುತ್ತಿದೆ .ಕ್ಷೇತ್ರಗಳ ಆಡಳಿತ ವ್ಯವಸ್ಥೆಯನ್ನು ಒಂದು ವರ್ಷದ ಪರ್ಯಾಯವಾಗಿ ಹನ್ನೆರಡುಮನೆಯವರು ನೆಡೆಸಿಕೊಂಡು ಬರುತ್ತಿದ್ದಾರೆ ವರ್ಷವೂ ದೀಪಾವಳಿಯ ಸಂದರ್ಭದಲ್ಲಿ ಆಡಳಿತೆ ಹಸ್ತಾಂತರ ಆಗುವುದು ರಿವಾಜು .ಪ್ರತಿವರ್ಷವೂ ಬಲಿಪಾಡ್ಯದಂದು ಧೂಮಾವತಿ ದೈವ ಸ್ಥಾನದಲ್ಲಿ ತಂಬಲ ಪೂಜೆ ನಡೆಯುತ್ತದೆ .ಅಂದು ಚಾಲ್ತಿ ವರ್ಷದ ಆಡಳ್ತೆದಾರರು ಆ ವರ್ಷದ ಆಡಳಿತೆಯ ಖರ್ಚುವೆಚ್ಚಗಳನ್ನು ಸಭೆಯ ಮುಂದಿಡುತ್ತಾರೆ .ಆ ದಿನದಿಂದ ಆಡಳಿತೆಯು ನೂತನ ಆಡಳ್ತೆ ದಾರರಿಗೆ ಹಸ್ತಾಂತರ ಆಗುತ್ತದೆ .

ಪ್ರಸ್ತುತ ಕಾನ ಗ್ರಾಮದಲ್ಲಿರುವ ಹನ್ನೆರಡು ಮನೆಯವರು ಸೇರಿ ಕಾನ ಶಂಕರ ನಾರಾಯಣ ದೇವರ ಮಠ ,ಧೂಮಾವತಿ ದೈವಸ್ಥಾನ ಹಾಗೂ ನಾಣಿತ್ತಿಲಿನಲ್ಲಿರುವ ಧೂಮಾವತಿ ದೈವದ ಭಂಢಾರ ಮನೆಯನ್ನು ಪುನರ್ನಿರ್ಮಾಣ ಮಾಡುವುದೆಂದು ನಿಶ್ಚಯಿಸಿ ಅದಕ್ಕೊಂದು ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ . ಶಂಕರ ನಾರಾಯಣ ದೇವರ ಮಠದಲ್ಲಿ ಅಷ್ಟಮಂಗಲ ಪ್ರಶ್ನೆ ಇರಿಸಿ ಅದರಲ್ಲಿ ಕಂಡು ಬಂದ ದೋಷಗಳಿಗೆ ನಿವೃತ್ತಿಯನ್ನೂ ಮಾಡಲಾಗಿದೆ . ತದನಂತರದ ದಿನಗಳಲ್ಲಿ ಜೀರ್ಣೋದ್ಧಾರ ಕೆಲಸಕಾರ್ಯಗಳಲ್ಲಿ ಪರವೂರಿನಲ್ಲಿ ನೆಲೆಸಿರುವ ಇಲ್ಲಿನ ಹನ್ನೆರಡು ಮನೆಗಳಿಗೆ ಸೇರಿದವರನ್ನು ಸೇರಿಸಿ ಮುಂದುವರಿಯಬೇಕೆಂದು ತೀರ್ಮಾನಿಸಲಾಗಿದೆ .